ಹಾಸನದ ಅರಸಿಕೆರೆಯಲ್ಲಿ ಹೊಯ್ಸಳ ಕಾಲದ ಸುಂದರ ಚಂದ್ರಮೌಳೇಶ್ವರ ದೇಗುಲವಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ದೇಗುಲಕ್ಕೆ ತಲುಪಲು ಅರಸಿಕೆರೆಯ ಮುಖ್ಯರಸ್ತೆಯಾದ ಬೆಂಗಳೂರು- ಹೊನ್ನಾವರ ರಾಜ್ಯಹೆದ್ದಾರಿಯಲ್ಲಿ ಅರಸೀಕೆರೆ ತಲುಪಿದೊಡನೆ ಬಲಕ್ಕೆ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಗೆ ತಿರುಗಿಕ್ಕೊಂಡು ಅರ್ಧ ಕಿಮೀ ಸಾಗಬೇಕು. ಸುಂದರ ಕಪ್ಪುಶಿಲೆಯ ಹೊಯ್ಸಳ ಕಾಲದ ಶಿಲ್ಪಕಲೆ ಮತ್ತು ನಕ್ಷತ್ರಾಕಾರದ ದೇವಾಲಯ ನಿಮ್ಮ ಕಣ್ಸೂರೆ ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇಗುಲವು ಬೇಳೂರು ಹಳೇಬೀಡು ದೇಗುಲಗಳಷ್ಟು ಗಾತ್ರದಲ್ಲಿ ದೊಡ್ದದಿಲ್ಲವಾದರೂ ಸೌಂದರ್ಯದಲ್ಲಿ ಸರಿಸಮಾನವಾಗಿದೆ. ಒಮ್ಮೆ ಹೋಗಿ ನೋಡಿಯೇ ತಿಳಿಯಿರಿ. ಸಾವಿರಕ್ಕಿಂತ ಹೆಚ್ಚು ವರ್ಷಗಳಿಂದ ಮಾಸದೆ ಉಳಿದಿರುವ ಶಿಲ್ಪಿ ಕಲಾ ಸೌಂದರ್ಯ ಎಲ್ಲ ಹೊಯ್ಸಳ ನಿರ್ಮಿತ ದೇವಾಲಗಳಲ್ಲಿ ನೋಡ ಸಿಗುತ್ತದೆ. ಅಂತೆಯೇ ನೀವು ತಿಪಟೂರು ತಾಲ್ಲೂಕಿನ ಅರಳಗುಪ್ಪೆಯ ಚೆನ್ನ ಕೇಶವ ಸ್ವಾಮಿ ದೇಗುಲಕ್ಕೂ, ತುರುವೇಕೆರೆಯ ಚೆನ್ನಿಗರಾಯ ದೇಗುಲಕ್ಕೂ, ಚಿಕ್ಕಮಗಳೂರಿನ ಬೆಳವಾಡಿಯ ವೀರನಾರಾಯಣ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿದರೆ ಬಹಳ ಸಂತೋಷಪದುವಿದೆಂದು ನಂಬಿದ್ದೇನೆ.