Skip to main content

Posts

Showing posts from June, 2023

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ || ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ || ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||

ಕಾಗದ ಬಂದಿದೆ

ಕಾಗದ ಬಂದಿದೆ ನಮ್ಮ ಕಮಲನಾಭನದು ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ || ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ ನೇಮನಿಷ್ಠೆಯೊಳಿರಿರೆಂಬೊ ಕಾಗದ ಬಂದಿದೆ ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ||೧|| ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ

ಕರುಣಿಸೋ ರಂಗ

ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ | ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ॥ ಪ || ಕರುಣಿಸೋ ॥ ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ | ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ || ಕರುಣಿಸೋ || ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ ಕರಿರಾಜ ನಂತೆ | ವರಕಪಿ ಯಂತೆ ದಾಸ್ಯವ ಮಾಡಲರಿಯೇ | ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ || ಕರುಣಿಸೋ || ಬಲಿಯಂತೆ ದಾನವ ಕೊಡಲು ಅರಿಯೆ | ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | ಸಲಹೋ ದೇವರ ದೇವ ಶ್ರೀಪುರಂದರವಿಠ್ಠಲ || ೩ || ಕರುಣಿಸೋ ||